Friday, July 25, 2008

ಆ ದಿನಗಳು.... ಈ ಚಟ ಶುರುವಾದ ದಿನಗಳು....

೨೦೦೫ ನೇ ಇಸವಿಯ ಜೂನ್ ತಿಂಗಳ ಕಥೆ ಇದು!!! ನನ್ನ BE ಪರೀಕ್ಷೆ ಮುಗಿದಿತ್ತು.. ಕೆಲಸಕ್ಕೆ ಸೇರಲು ಇನ್ನೂ ಮೂರ್ನಾಲ್ಕು ತಿಂಗಳ ಸಮಯವಿತ್ತು. ಹೆಚ್ಚು-ಕಡಿಮೆ ಅದೇ ಸ್ಹ್ತಿಥಿಯಲ್ಲಿ ನನ್ನ ಮೂವರು ಸ್ನೇಹಿತರಿದ್ದರು. ಅವರೆಲ್ಲ ಮನೆಯ ಬಳಿ ಇದ್ದರಿಂದ ಬೆಳಗ್ಗಿನಿಂದ ಸಂಜೆಯವರೆಗೂ ( ನಮಗೆ ಬೆಳಗ್ಗೆ ಎಂದರೆ ಹೊರ ಜಗತ್ತಿಗೆ ಮಧ್ಯಾನ!! ನಮಗೆ ಸಂಜೆ ಎಂದರೆ ಮಿಕ್ಕವರಿಗೆ ರಾತ್ರಿ!!) ಅಲ್ಲಿಲ್ಲಿ ಸುತ್ತುವದು, ಬಿಸಲು-ಮಳೆ ಹೆಚ್ಚಿದಾಗ ಮನೆಯಲ್ಲಿ ಸಿನಿಮಾ ನೋಡುವುದರಲ್ಲಿ ಶ್ರಮ ಪಡುತಿದ್ದೆವು.
ಈ ಚಟದ ಕಥೆ ಹೇಳಲು ನಿಮಗೆ ನಮ್ಮ ಬಡಾವಣೆಯ (layout) ವಿವರಣೆ ಕೊಡಬೇಕು. ಸುಮಾರು ಹದಿನೈದು ವರ್ಷಗಳಿಂದ ನಮ್ಮ ಮನೆಯ ಸ್ವಲ್ಪ ದೂರದಲ್ಲಿ "ಮೋಹನ್ ಬಾರ್" ಎಂಬ ಸುಪ್ರಸಿದ್ಧ ಸಾರಾಯಿ ಅಂಗಡಿ ಇದೆ. ಇದರ ಮುಂದೆ ಇರುವ ಬಸ್ ನಿಲ್ದಾಣಕ್ಕೆ "ಮೋಹನ್ ಬಾರ್ ಬಸ್ ಸ್ಟಾಪ್" ಎಂದೇ ಕರೆಯುತ್ತಾರೆ. ಈಗ ಕಡೆಯ ಮೂರ್ನಾಲ್ಕು ವರ್ಷಗಳಿಂದ ಸ್ವಲ್ಪ ಆಧುನಿಕ ಹಾಗೂ ಆಡಂಬರಯುತವಾದ "ಆರ್ ಕೆ ಬಾರ್" ಎಂಬ ಇನ್ನೊಂದು ಬಾರ್ ನಮ್ಮ ಮನೆಯಿಂದ ಅಷ್ಟೇ ದೂರದಲ್ಲಿ ಶುರುವಾಗಿದೆ.
ಹ್ಹಾ...ಇನ್ನು ಈಗ ಆ ಚಟದ ಕಥೆಯನ್ನು ಮುಂದುವರಿಸುವೆ.. ಒಂದು ಸಂಜೆ, ಬೀದಿ ಸುತ್ತಲು ಕರೆಯಲು ನನ್ನ ಸ್ನೇಹಿತನ ಮನೆಗೆ ಹೋಗಿದ್ದೆ.. ಅವನು ತಯಾರಾಗಿ ಬರುವುದರಲ್ಲಿ ಅವರ ತಾಯಿ ನನ್ನನ್ನು "ಎಲ್ಲಿಗೆ ಹೋಗುತೀರೋ ???" ಎಂದು ಕೇಳಿದರು. "ಆಂಟಿ, ಇಲ್ಲೇ ಮೋಹನ್ ಬಾರ್-ಗೆ. ಕುಡಿಯೋಕ್ಕೆ" ಎಂದು ನಾನು ಉತ್ತರಿಸಿದೆ. ಅವರು ಆಶ್ಚರ್ಯಚಕಿತರಾಗಿ ನನ್ನನ್ನು ನೋಡುತ್ತಿದ್ದರು. ನಾನು ಮುಂದುವರಿಸಿದೆ "ಇಲ್ಲೇ ಆರ್ ಕೆ ಬಾರ್-ಗೆ ಹೋಗಬಹುದು. ಆದರೆ ಅಲ್ಲಿ ಕುಡಿದರೆ ಸಮಾಧಾನ ಆಗೋದಿಲ್ಲ. ಕುಡಿದ ಖುಷಿ ಇರುವುದಿಲ್ಲ!!". ಇನ್ನು ಮುಂದಿನ ಪ್ರಶ್ನೆ ಬರುವ ಮುನ್ನ ಅಲ್ಲಿಂದ ಪರಾರಿಯಾದೆವು.
ಕೆಲ ದಿನಗಳ ನಂತರ ಕೆಲಸಕ್ಕೆ ಸೇರಿದೆವು. ನಮ್ಮ ಸ್ವಂತ ಹಣ ಜೇಬಿನಲ್ಲಿ ಇರುತಿತ್ತು. ಶನಿವಾರ-ಭಾನುವಾರ ವೀಕೆಂಡ್-ಗಾಗಿ ಅಲ್ಲಿ ಕುಡಿಯಲು ಹೋಗುವುದು ಅಭ್ಯಾಸವಾಯಿತು. ಮನೆಯವರು-ಪರಿಚಿತರು ಕೇಳಿದಾಗೆಲ್ಲ "ಮೋಹನ್ ಬಾರ್-ಗೆ ಹೋಗುತಿದ್ದೇವೆ" ಎಂದು ತಿಳಿಸಿಯೇ ಹೋಗುತಿದ್ದೆವು!!!
ಸಿಂಗಪೂರಿನಿದ ಬಂದು ಒಂದು ತಿಂಗಳಾಗಿದೆ. ಇನ್ನೆರಡು ದಿನದಲ್ಲಿ ವಾಪಸ್ ಹೋಗಬೇಕು. ಈ ಒಂದು ತಿಂಗಳಲ್ಲಿ ಕಿನಿಷ್ಟ-ಪಕ್ಷ ಹತ್ತು ಸಲ ಅಲ್ಲಿಗೆ ಕುಡಿಯಲು ಹೋಗಿದ್ದೇನೆ. ಮೂರು ವರ್ಷದಿಂದ ಅದೇ ಹತ್ತು ರುಪಾಯಿ ಬೆಲೆಗೆ ಕುಡಿಯುತಿದ್ದೇನೆ. ಹತ್ತು ರುಪಾಯಿ ಎಂದರೆ ಲೋಕಲ್ ಸಾರಾಯಿ ಎಂದುಕೊಂದರಾ? ಇಲ್ಲಾ, ನಾವು ಕುಡಿಯುವುದು ಮೋಹನ್ ಬಾರ್ ಎದುರಿಗೆ ಸಿಗುವ ಎಳೆನೀರು!!! ಬಹಳ ಸಿಹಿಯಾಗಿರುವುದು!! ನೀವೂ try ಮಾಡಿ...

ಗಮನಿಸಿ: ಇದು ಕನ್ನಡ ಬರೆವಣಿಗೆಯಲ್ಲಿ ನನ್ನ ಮೊದಲ ಪ್ರಯತ್ನ. ನಿಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಲು ಕೋರುತ್ತೇನೆ.

1 comment:

Mahesha BR Pandit said...

ಚೆನ್ನಾಗಿದೆ. ಹೀಗೆ ಬರೆಯುತ್ತಿರಿ.